
ಬೆಂಗಳೂರು: ನಟ ಚೇತನ್ ಅಹಿಂಸಾ ನೀಡಿದ ದೂರಿನ ಮೇರೆಗೆ ಸಿನಿಮಾ ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆದರಿಕೆ ಹಾಕಿದ್ದು ಹಾಗೂ ಮನೆ ಮುಂದೆ ಗಲಾಟೆ ನಡೆಸಿದ ಆರೋಪದಡಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ.ರಾಜ್ಕುಮಾರ್ ಸಮಾಧಿ ಜಾಗದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಮಾಡಿದ್ದ ಪೋಸ್ಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಪೋಸ್ಟ್ ವಿರೋಧಿಸಿ ಕೆಲವರು ಚೇತನ್ ನಿವಾಸದ ಬಳಿ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಟ ಚೇತನ್ ಅಹಿಂಸಾ ಇಂದು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾ.ರಾ ಗೋವಿಂದ್, ಶಿವರಾಮೇಗೌಡ, ಶಿವಕುಮಾರ್ ನಾಯ್ಕ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಚೇತನ್, “ಕಳೆದ ಶನಿವಾರ ಸಾ.ರಾ ಗೋವಿಂದು ನನ್ನ ಮನೆ ಬಳಿ ಬಂದಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದರು. ಅವರ ಹಿನ್ನೆಲೆ ಬೇರೆ ರೀತಿಯದ್ದಾಗಿದೆ. ದುರಹಂಕಾರ ಮತ್ತು ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ. ವಿವಿಧ ಸಂಘಟನೆಗಳ ಜೊತೆ ಸೇರಿ ದಾಖಲೆ ಸಮೇತ ದೂರು ನೀಡಿದ್ದೇವೆ” ಎಂದು ಆರೋಪಿಸಿದರು.
ಪ್ರಕರಣ ಇದೀಗ ಸಿನಿಮಾ ವಲಯ ಹಾಗೂ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಸೆಳೆದಿದೆ.

