ತಮಿಳುನಾಡಿನಲ್ಲಿ ವಿಜಯ್‌ ಸುನಾಮಿ | 100ರ ಗಡಿ ದಾಟಿದ TVK, ಡಿಎಂಕೆಗೆ ಭಾರೀ ಹಿನ್ನಡೆ

ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿರುವ ಚುನಾವಣಾ ಮತ ಎಣಿಕೆಯಲ್ಲಿ ನಟ ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದೆ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ TVK, 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇಂದು ಬೆಳಗ್ಗೆ 10 ಗಂಟೆಯ ವೇಳೆಗೆ TVK 101 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ DMK ಕೇವಲ 52 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. AIADMK ಮೈತ್ರಿಕೂಟ 79 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇನ್ನೂ ದೊಡ್ಡ ಶಾಕ್ ಎಂದರೆ, ಡಿಎಂಕೆ ಭದ್ರಕೋಟೆ ಎಂದು ಪರಿಗಣಿಸಲಾದ ಕ್ಷೇತ್ರಗಳಲ್ಲಿಯೇ TVK ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಪ್ರತಿನಿಧಿಸುವ ಕೊಳತ್ತೂರು ಕ್ಷೇತ್ರ ಹಾಗೂ ಉದಯನಿಧಿ ಸ್ಟಾಲಿನ್‌ ಸ್ಪರ್ಧಿಸಿರುವ ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರಗಳಲ್ಲಿ TVK ಮುನ್ನಡೆ ಕಾಯ್ದುಕೊಂಡಿದೆ ಎನ್ನಲಾಗಿದೆ.

ಇತ್ತ ತಿರುಚಿ ಪೂರ್ವ ಹಾಗೂ ಪೆರಂಬೂರು ಕ್ಷೇತ್ರಗಳಲ್ಲೂ ವಿಜಯ್‌ ಪಕ್ಷದ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇದರಿಂದ ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಪ್ರಸ್ತುತ ಯಾವುದೇ ಪಕ್ಷ ಸ್ಪಷ್ಟ ಬಹುಮತದತ್ತ ಸಾಗದ ಹಿನ್ನೆಲೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

Leave a Reply

Your email address will not be published. Required fields are marked *