
ಏಪ್ರಿಲ್‌ನಲ್ಲೇ ತೀವ್ರ ಬಿಸಿಲಿನಿಂದ ಕರುನಾಡು ಕಾದ ಕಾವಲಿಯಂತಾಗಿದೆ. ಆದರೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಪ್ರಕಾರ, ಮೇ ತಿಂಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆ ಕಾಣಲಿದೆ. 3 ರಿಂದ 4 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು IMD ತಿಳಿಸಿದೆ. ಮೇ ಮೊದಲ ವಾರದಲ್ಲೇ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುಭಾಗದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.
ಈ ವರ್ಷ ಮಳೆಯ ಕೊರತೆ ಮತ್ತು ನಿರಂತರ ಬಿಸಿಲು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ದೇಶದ ಹಲವಾರು ನಗರಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದೆ. ಬೆಂಗಳೂರು ಕೂಡ 38 ಡಿಗ್ರಿ ದಾಟಿ “ಬೆಂದಕಾಳೂರು” ಎಂದು ಕರೆಯುವ ಸ್ಥಿತಿಗೆ ತಲುಪಿದೆ. ಮೇ ಅಂತ್ಯದವರೆಗೂ ಬಿಸಿಲಿನ ತೀವ್ರತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

