
ಬೆಂಗಳೂರು: ರಾಜಧಾನಿಯ ನಂದಿನಿ ಲೇಔಟ್‌ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಪಕ್ಕದ ಮನೆಗಳು ಹಾಗೂ ಲೇಡೀಸ್ ಪಿಜಿಗೂ ಹಬ್ಬಿದ ಪರಿಣಾಮ ದೊಡ್ಡ ದುರಂತ ತಪ್ಪಿದಂತಾಗಿದೆ.
ಗೋಡೌನ್‌ನಲ್ಲಿ ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿದ್ದ ಕಾರಣ ಬೆಂಕಿ ಭಾರೀ ವೇಗದಲ್ಲಿ ಹರಡಿತು. ಬೆಂಕಿಯ ತೀವ್ರತೆಗೆ ಸುತ್ತಮುತ್ತಲಿನ ಮರಗಳು, ಕಬ್ಬಿಣದ ಗೇಟ್‌ಗಳು ಕೂಡ ಹೊತ್ತಿ ಉರಿದವು.
ಘಟನೆಯ ವೇಳೆಗೆ ಪಕ್ಕದ ಲೇಡೀಸ್ ಪಿಜಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಯುವತಿಯರು ವಾಸವಿದ್ದರು. ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಂತೆ ಆತಂಕಗೊಂಡ ಯುವತಿಯರು ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟರು.
ಹೊರಗೆ ಬರಲು ದಾರಿ ಇಲ್ಲದ ಪರಿಸ್ಥಿತಿಯಲ್ಲಿ ಕೆಲವರು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದರೆ, ಇನ್ನೂ ಕೆಲವರು ಪಿಜಿಯ ಕಾಂಪೌಂಡ್ ಗೋಡೆ ಹಾರಿ ಸುರಕ್ಷಿತ ಸ್ಥಳಕ್ಕೆ ಪಾರಾದರು. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿಯ ಆವೇಶಕ್ಕೆ ಪ್ಲಾಸ್ಟಿಕ್ ಗೋಡೌನ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸ್ಥಳೀಯರು ತಡರಾತ್ರಿ ಭಯಭೀತರಾಗಿದ್ದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

