
ಬೆಂಗಳೂರು ನಗರದ ಹೆಮ್ಮೆಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ಭಾರೀ ಭದ್ರತಾ ಲೋಪ ಬಯಲಾಗಿದೆ. ಐಪಿಎಲ್ ಪಂದ್ಯ ನಡೆಯುವ ದಿನವೇ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಕೇಬಲ್ಗಳನ್ನು ಕತ್ತರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಾಂತ್ರಿಕ ತಂಡ ಪರಿಶೀಲಿಸಿದಾಗ, ಹಲವು ಪ್ರಮುಖ ಸ್ಥಳಗಳಲ್ಲಿನ ಕ್ಯಾಮೆರಾಗಳು ಆಫ್ಲೈನ್ ಆಗಿರುವುದು ಪತ್ತೆಯಾಯಿತು.
ತನಿಖೆಯಲ್ಲಿ, ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ ಸಂಸ್ಥೆಗೆ ಸಂಬಂಧಿಸಿದ ಇಬ್ಬರು ಆರೋಪಿಗಳು ಅನಧಿಕೃತವಾಗಿ ಕ್ರೀಡಾಂಗಣ ಪ್ರವೇಶಿಸಿ, NVR ಮತ್ತು ಆಪ್ಟಿಕಲ್ ಫೈಬರ್ ಕನೆಕ್ಷನ್ಗಳನ್ನು ಹಾನಿಗೊಳಿಸಿರುವುದು ಬಹಿರಂಗವಾಗಿದೆ. ಇವರು ಮಾನ್ಯ ಪಾಸ್ ಇಲ್ಲದೆ ನಿಷ್ಕ್ರಿಯ ಕಾರ್ಡ್ ಬಳಸಿ ಒಳನುಗ್ಗಿರುವುದು ಆತಂಕಕಾರಿ ವಿಷಯ.
ಈ ಕೃತ್ಯದಿಂದ ಸ್ಟೇಡಿಯಂ ಪ್ರವೇಶ ದ್ವಾರಗಳು, ಕಾರ್ಪೊರೇಟ್ ಸ್ಟ್ಯಾಂಡ್ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳ ಭದ್ರತಾ ಮೇಲ್ವಿಚಾರಣೆ ಸಂಪೂರ್ಣ ಕುಸಿದಿತ್ತು. ಇದರಿಂದ ಪೊಲೀಸರಿಗೆ ಪಂದ್ಯ ಸಮಯದಲ್ಲಿ ಅಗತ್ಯ ಸಿಸಿಟಿವಿ ಫೀಡ್ ದೊರಕಲಿಲ್ಲ.
ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ IPL ಪಂದ್ಯಗಳ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

