
ಚಿಕ್ಕಮಗಳೂರು, ಏಪ್ರಿಲ್ 18: ಬ್ಯಾಂಕ್‌ನಂತಹ ಸಾರ್ವಜನಿಕ ಸ್ಥಳದಲ್ಲಿ ಸಿಬ್ಬಂದಿಗಳ ನಡುವಿನ ಗಲಾಟೆ ಗ್ರಾಹಕರ ಮುಂದೆ ನಡೆದಿರುವ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯ ಎನ್.ಆರ್.ಪುರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಈ ಅಹಿತಕರ ಘಟನೆ ನಡೆದಿದೆ.
ಬ್ಯಾಂಕಿನ ದೈನಂದಿನ ಕೆಲಸದ ವೇಳೆ ಮಹಿಳಾ ಸಿಬ್ಬಂದಿ ದೀಪಾ ಮತ್ತು ಕ್ಯಾಶಿಯರ್ ಚಾಣಕ್ಯ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ತೀವ್ರವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಘಟನೆಯ ವೇಳೆ ಮಹಿಳಾ ಸಿಬ್ಬಂದಿ ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಹಿಳಾ ಸಿಬ್ಬಂದಿ ದೀಪಾ, ಕ್ಯಾಶಿಯರ್ ಚಾಣಕ್ಯ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಹಣ ಕಟ್ಟಲು ಹೋದ ವೇಳೆ ತನ್ನ ಕೈ ಹಿಡಿದು ಎಳೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಆಕ್ರೋಶಗೊಂಡ ಅವರು ಗ್ರಾಹಕರ ಎದುರೇ ಪ್ರತಿಕ್ರಿಯಿಸಿದ್ದಾರೆ.
ಘಟನೆ ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರೂ, ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಈ ಘಟನೆ ಸ್ಥಳದಲ್ಲಿದ್ದ ಗ್ರಾಹಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ವೈರಲ್ ಆಗಿದೆ.
ಬ್ಯಾಂಕ್‌ನಂತಹ ಜವಾಬ್ದಾರಿಯುತ ಸಂಸ್ಥೆಯಲ್ಲಿ ಈ ರೀತಿಯ ವರ್ತನೆ ಗ್ರಾಹಕರಲ್ಲಿ ಅಸಮಾಧಾನ ಮೂಡಿಸಿದೆ.

