ಕಡೂರಿನಲ್ಲಿ ರಾಗಿ ದಂಧೆ: ಪೊಲೀಸರ ವಿರುದ್ಧ ಗಂಭೀರ ಆರೋಪ..!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ಬೆಚ್ಚಿಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದೆ. ರೈತರಿಗೆ ನ್ಯಾಯ ನೀಡಬೇಕಾದ ವ್ಯವಸ್ಥೆಯೇ ಈಗ ಪ್ರಶ್ನಾರ್ಹವಾಗಿದ್ದು, ರಾಗಿ ದಂಧೆಯ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮಧ್ಯರಾತ್ರಿ 11 ಗಂಟೆ ಸುಮಾರಿಗೆ, ಬಿರಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಮನೆಯ ಮುಂದೆ ಲಾರಿಗಳ ಮೂಲಕ ಅಕ್ರಮವಾಗಿ ರಾಗಿ ತರಲಾಗುತ್ತಿದೆ ಎಂಬ ಆರೋಪ ಇದೆ.

ನಂತರ ಆ ರಾಗಿಯನ್ನು ಟ್ಯಾಕ್ಟರ್‌ಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಆಶ್ಚರ್ಯದ ಸಂಗತಿ ಏನೆಂದರೆ, ಈ ಎಲ್ಲಾ ಘಟನೆಗಳ ನಡುವೆ ಸ್ಥಳದಲ್ಲೇ ಇದ್ದ ಪಂಚನಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನರೇಂದ್ರ ಸೇರಿದಂತೆ ಕೆಲ ಸಿಬ್ಬಂದಿಗಳು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿಡಿಯೋ ಸಾಕ್ಷಿಗಳೂ ಇದನ್ನು ದೃಢಪಡಿಸುತ್ತಿವೆ ಎಂದು ಹೇಳಲಾಗಿದೆ. ಸರ್ಕಾರ ರೈತರಿಂದ ರಾಗಿ ಖರೀದಿಸಲು ಕೇಂದ್ರಗಳನ್ನು ಸ್ಥಾಪಿಸಿ, ಒಂದು ಚೀಲಕ್ಕೆ ₹5300 ನಿಗದಿ ಮಾಡಿದೆ. ಆದರೆ ಕೆಲ ವರ್ತಕರು ಹೊರ ರಾಜ್ಯಗಳಿಂದ ಕಡಿಮೆ ದರದಲ್ಲಿ ರಾಗಿ ತಂದು, ರೈತರ FID ಬಳಸಿ ಕೇಂದ್ರಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, ಕಡೂರು ಆಹಾರ ನಿರೀಕ್ಷಕ ಶ್ರೀನಿವಾಸ್ ಹಾಗೂ ಸಿಂಗಟಗೆರೆ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ನೇತೃತ್ವದಲ್ಲಿ ಲಾರಿ ಮತ್ತು ಟ್ಯಾಕ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ದೂರು ಕೂಡ ದಾಖಲಾಗಿದೆ. ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳೇ ಕಳ್ಳರಿಗೆ ಬೆಂಬಲ ನೀಡಿದರೆ, ರೈತರ ಭವಿಷ್ಯ ಯಾವ ದಿಕ್ಕಿಗೆ ಸಾಗುತ್ತದೆ? ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *