
ಜಾಗತಿಕ ರಾಜಕೀಯದಲ್ಲಿ ಅಮೆರಿಕ ಮತ್ತು ಕ್ಯೂಬಾ ನಡುವಿನ ಶೀತಲ ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಕ್ಯೂಬಾದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕೆನೆಲ್, ಯಾವುದೇ ರೀತಿಯ ಮಿಲಿಟರಿ ಆಕ್ರಮಣವನ್ನು ಎದುರಿಸಲು ತಮ್ಮ ದೇಶ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ.
ಎನ್ಬಿಸಿ ನ್ಯೂಸ್ನ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರು, ಅಮೆರಿಕವು ಕ್ಯೂಬಾದ ಮೇಲೆ ದಾಳಿ ಮಾಡಲು ಅಥವಾ ಅಧ್ಯಕ್ಷರ ಅಪಹರಣಕ್ಕೆ ಸಂಚು ರೂಪಿಸಲು ಯಾವುದೇ ಮಾನ್ಯ ಕಾರಣಗಳಿಲ್ಲ. ಒಂದು ವೇಳೆ ಅಂತಹ ಅಚಾತುರ್ಯ ನಡೆದರೆ, ಕ್ಯೂಬಾದ ಜನರು ತಾಯ್ನಾಡಿಗಾಗಿ ಹೋರಾಡುತ್ತಲೇ ಮಡಿಯಲು ಸಿದ್ಧರಿದ್ದಾರೆ ಎಂದು ಭಾವನಾತ್ಮಕವಾಗಿ ಮತ್ತು ಆಕ್ರೋಶದಿಂದ ನುಡಿದ್ದಾರೆ.
- ಆಕ್ರಮಣದ ಆತಂಕ: ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ನಂತರ, ಅಮೆರಿಕದ ಮುಂದಿನ ಗುರಿ ಕ್ಯೂಬಾ ಎಂಬ ಚರ್ಚೆಗಳು ನಡೆಯುತ್ತಿವೆ.
- ತೈಲ ದಿಗ್ಬಂಧನ: ಅಮೆರಿಕ ವಿಧಿಸಿರುವ ಆರ್ಥಿಕ ಮತ್ತು ತೈಲ ದಿಗ್ಬಂಧನದಿಂದಾಗಿ ಕ್ಯೂಬಾದಲ್ಲಿ ಇಂಧನ ಮತ್ತು ವಿದ್ಯುತ್ ಅಭಾವ ತೀವ್ರಗೊಂಡಿದೆ. ಇದು ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ.
- ಸಂಧಾನಕ್ಕೆ ಸಿದ್ಧ: ಯಾವುದೇ ಪೂರ್ವಷರತ್ತುಗಳಿಲ್ಲದೆ ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿರುವ ಕೆನೆಲ್, ಆದರೆ ನಮ್ಮ ರಾಜಕೀಯ ವ್ಯವಸ್ಥೆಯನ್ನು ಬದಲಿಸುವಂತೆ ಒತ್ತಡ ಹೇರುವುದನ್ನು ಒಪ್ಪಲಾಗದು ಎಂದಿದ್ದಾರೆ.

